Monday, January 9, 2017

ಹೈದರಾಬಾದಿನಲ್ಲಿ‌ ಕನ್ನಡಿಗರಿಗಿಲ್ಲ ಮನರಂಜನೆ

ನಾವು ಕನ್ನಡಿಗರು ನಮಗೂ ಎಲ್ಲರಂತೆ ಮನರಂಜನೆಯ ಹಕ್ಕಿದೆ‌. ಹೈದರಾಬಾದಿನಲ್ಲಿ ತೆಲುಗು ಮತ್ತು ಉರ್ದು ಬಿಟ್ಟರೆ ಅತಿ ಹೆಚ್ಚು ಜನ ಮಾತನಾಡುವ ಭಾಷೆ ಕನ್ನಡ. ಸೋಜಿಗ ಅಂದರೆ‌ ಹೈದರಾಬಾದಿನಲ್ಲಿ ತೆಲುಗು‌, ಹಿಂದಿ, ಇಂಗ್ಲಿಶ್ ಹೊರತುಪಡಿಸಿ ಮಲೆಯಾಳಂ , ತಮಿಳು ಹಾಗು ಮರಾಟಿ ಚಿತ್ರಗಳು ಬಿಡುಗಡೆಯಾಗುತ್ತವೆ ಕನ್ನಡದ ಸದ್ದೆ ಇಲ್ಲ.

ಕರ್ನಾಟಕದಲ್ಲಿ ಹೆಚ್ಚು ಕಮ್ಮಿ ಬಿಡುಗಡೆಯಾಗುವ ಎಲ್ಲ ಚಿತ್ರಗಳು ತೆರೆ ಕಾಣುತ್ತವೆ ಆದರೆ‌ ಅದೆ ಹೈದರಾಬಾದಿನಲ್ಲಿ ಕನ್ನಡದ ಚಿತ್ರಗಳು ಏಕೆ ಬಿಡುಗಡೆಯಾಗುವುದಿಲ್ಲ? ಹೈದರಾಬಾದಿನಲ್ಲಿ ಕನ್ನಡಿಗರಿಗೆ ಬೆಲೆಯಿಲ್ಲದ ಮೇಲೆ ನಾವೇಕೆ ತೆಲುಗು ಚಿತ್ರಗಳಿಗೆ ಇಲ್ಲಿ ಮಣೆ ಹಾಕಬೇಕು? ಇದೊಂದು ರಾಜಕೀಯವಾಗಿ ಆಗಬೇಕಿರುವ ಕೆಲಸವಾಗಿದೆ. ಕನ್ನಡದ ಸೇವಕರಂತೆ ಪೋಸು ಕೊಡುವ ನಟರಿಗೆ ಇದೇನು ಕಣ್ಣಿಗೆ ಕಾಣುತ್ತಿಲ್ಲವೆ? ಕನ್ನಡ ಚಿತ್ರಗಳಿಗೆ ತೆಲುಗು ನಟ ನಟಿಯರಿಂದ ಹಾಡು ಹೇಳಿಸುವ ನಮ್ಮವರು ಅದೆ ಗೆಳೆತನದಲ್ಲಿ ನಮ್ಮ‌ ಕನ್ನಡ ಚಿತ್ರಗಳು ಹೈದರಾಬಾದಿನಲ್ಲಿ ರಿಲೀಸ್ ಆಗುವಂತೆ ಮಾಡಬೇಕೆಲ್ಲವೆ?

ಈಗಾಗಲೆ ವಿದೇಶದಲ್ಲಿ ರಿಲೀಸ್ ಆಗಿರುವ ಕಿರಿಕ್ ಪಾರ್ಟಿ ಚಿತ್ರವನ್ನು ಇಷ್ಟೊಂದು ಕನ್ನಡಿಗರಿರುವ ಹೈದರಾಬಾದಿನಲ್ಲಿ ನೋಡಲಾಗುತ್ತಿಲ್ಲ. ಮಾರ್ಕೆಟ್ ಇಲ್ಲ ಕನ್ನಡ ಸಿನಿಮಾಗಳಿಗೆ ಎಂದು ಬಡಿದುಕೊಳ್ಳುವ ಪಂಡಿತರು, ಮಾರ್ಕೆಟ್ ಒಳ್ಳೆ ಚಿತ್ರಗಳಿಗೆ ಸಿಗುತ್ತದೆ ಅಂತ ಸಾರಿ ಹೇಳುತ್ತ ಮೊದಲು ಕನ್ನಡ ಚಿತ್ರಗಳು ಹೈದರಾಬಾದಿನಲ್ಲಿ ರಿಲೀಸ್‌ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಈ ಪೋಸ್ಟ್ ಸಿಎಂ ತಲುಪುವ ತನಕ ಎಲ್ಲ ಹಂಚಿಕೊಳ್ಳಿ. ನಾನು‌ ಹೈದರಾಬಾದಿನಲ್ಲಿ ಕನ್ನಡ ಸಿನಿಮಾಗಳನ್ನು ಸದ್ಯಕ್ಕೆ‌ ಕಿರಿಕ್ ಪಾರ್ಟಿ ನೋಡಬೇಕಷ್ಟೆ!

Wednesday, April 13, 2016

ಡಬ್ಬಿಂಗ್ ಕನ್ನಡಕ್ಕೆ ಮಾರಕವೆನ್ನುವುದು ಒಂದು ಕಟುಸುಳ್ಳು

ಈ ಜಗತ್ತು ಎಷ್ಟು ವಿಶಾಲ ಅಲ್ವ? ಎಷ್ಟೊಂದ್ ಜನ ಎಷ್ಟೊಂದ್ ನುಡಿ‌! ೨೦೦೧ರ ಸೆನ್ಸಸಿನ ಪ್ರಕಾರ ಭಾರತದಲ್ಲಿ ೧೨೨ ಪ್ರಧಾನ ಭಾಷೆಗಳು ಹಾಗು ೧೫೯೯ ಇತರ ಭಾಷೆಗಳಿವೆ ಎಂದು ಹೇಳಲಾಗಿದೆ. ಇಂದು ಭಾರತದಲ್ಲಿ ಅಧಿಕೃತವಾಗಿರುವುದು ೨೨ ಭಾಷೆಗಳು ಮಾತ್ರ ಅದರಲ್ಲಿ ಕನ್ನಡವೂ ಒಂದು. ಕರ್ನಾಟಕದ ಮೊದಲ ಆಡಳಿತ ಭಾಷೆ ಕನ್ನಡ.

ಬ್ರಿಟಿಶರು ಭಾರತಕ್ಕೆ ಬರುವ ಮುನ್ನ ಭಾರತದಲ್ಲಿ ಇಂಗ್ಲಿಶ್ ಎಂಬ ಶಬ್ದವೆ ಯಾರು ಕೇಳಿರಲಿಕ್ಕಿಲ್ಲ. ಆದರೆ ಇಂದು ಅದು ಜಗತ್ತಿನ ಒಂದು ಉನ್ನತ ಭಾಷೆಯಾಗಿ ಹೇಗೆ ಮೆರೆದಾಡುತ್ತಿದೆ ನೋಡಿ. ಬ್ರಿಟಿಶರು ಇಲ್ಲಿ ಆಳಿದ ೨೦೦ ವರುಶ ಇಲ್ಲಿನ ಸಂಸ್ಕೃತ ಪಾಠಶಾಲೆಗಳು ಹಾಗೂ ಅರೇಬಿಕ್ ಕಲಿಸಿಕೊಡುತ್ತಿದ್ದ ಮದರಾಸಗಳನ್ನು ಜನರಿಂದ ತೊರೆಸಿ ಇಲ್ಲಿ ಆಂಗ್ಲ ಶಾಲೆಗಳನ್ನು ತೆರೆದು ಇಲ್ಲಿ ಜನರು ಇಂಗ್ಲಿಶ್ ಕಲಿಯುವಂತೆ ಮಾಡಿದರು. ಆದರೂ ಇಂಗ್ಲಿಶ್ ಇಂದಿಗೂ ಭಾರತದ ಹಲವಾರು ಮಂದಿಗೆ ಕಬ್ಬಿಣದ ಕಡಲೆಕಾಯಿ.

ಡಬ್ಬಿಂಗ್ ಏಕೆ ಬೇಕು?

ಜಗತ್ತಿನಲ್ಲಿರುವುದು ಕೋಟಿ ಭಾಷೆಗಳು, ಬರಿ ನಮಗೆ ಹೆಚ್ಚು ಗೊತ್ತಿರುವ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಅಲ್ಲ. ಹೀಗಾಗಿ ಈ ಎಲ್ಲ‌ ಭಾಷೆಗಳಲ್ಲೂ ಅತ್ಯದ್ಭುತವಾಗಿ ಕಲೆ, ಚಿತ್ರಗಳು ಮೂಡಿಬರುವಂತದ್ದನ್ನು ನೀವು ತಿಳಿಯಲು ನಿಮಗೆ ಎಲ್ಲ ಭಾಷೆಗಳನ್ನು ಕಲಿಯಬೇಕು ಅಂತಿಲ್ಲ. ಆಯಾ ಭಾಷೆಗಳಲ್ಲಿ ಮೂಡಿಬಂದ ಕೆಲಸಗಳನ್ನು ಕನ್ನಡಕ್ಕೆ ತಜ್ರುಮೆ ಮಾಡಿ ನಮಗೆ ನಮ್ಮ ಭಾಷೆಯಲ್ಲಿ ಅದರ ಅರಿವನ್ನು‌ ಪಡೆಯುವ ಒಂದು‌ ಮೂಲವೆ ಡಬ್ಬಿಂಗ್. ಇಷ್ಟಕ್ಕೂ ಡಬ್ಬಿಂಗ್ ಒಂದು ಭಾಷೆಯ ಅರಿವು ಮತ್ತು ತಿಳಿವನ್ನು ತನ್ನ ಭಾಷೆಗೆ ತಂದು ತನ್ನ ಭಾಷೆಯ ಅರಿವನ್ನು ಹೆಚ್ಚಿಸಿಕೊಳ್ಳುವ ಭಾಷಾ ಬೆಳವಣಿಗೆಯ ಒಂದು ಸಾಧನ. ಹಾಗಾಗಿ ಭಾರತದಲ್ಲೂ ಕೂಡ ಡಬ್ಬಿಂಗ್ ಗೆ ಯಾವ ಭಾಷೆಗೂ ಬ್ಯಾನ್ ಅನ್ನುವುದು ಇರುವುದಿಲ್ಲ.

ಡಬ್ಬಿಂಗ್ ಯಾಕೆ ಕನ್ನಡದಲ್ಲಿ ಇಲ್ಲ?

ಹಿಂದೆ ಕನ್ನಡ ಚಿತ್ರಗಳನ್ನು‌ ಮಾಡುತ್ತಿದ್ದ ದೊಡ್ಡವರು ಕನ್ನಡಕ್ಕೆ ಡಬ್ಬಿಂಗ್ ಬಂದಾಗ ಇಲ್ಲಿನ ಜನರು‌ ಇತರ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ನೋಡಿ ಇಷ್ಟಪಟ್ಟಿದ್ದಿರಬಹುದು. ಆಗ ಇಲ್ಲಿನ ಚಿತ್ರೋದ್ಯಮದ ಮಂದಿ ಅವರ ಚಿತ್ರಗಳು ಕನ್ನಡದಲ್ಲಿ ಇಲ್ಲಿ ಚೆನ್ನಾಗಿ ನಡೆಯುವುದನ್ನು ನೋಡಿ ಬೆದರಿ ಇವರು ತಾವೆ ಕನ್ನಡದ ಸರ್ವಾಧಿಕಾರಿ ಎಂಬಂತೆ ಕನ್ನಡದಲ್ಲಿ ಡಬ್ಬಿಂಗ್ ಗೆ ಬ್ಯಾನ್ ಎನ್ನುವಂತಹ ಕಾನೂನನ್ನು ರೂಪಿಸಿಬಿಟ್ಟಿದ್ದಾರೆ. ಅಂದು‌ ಮಾಡಿದ ಆ ಬ್ಯಾನ್ ಇಂದು ಎಷ್ಟು ಕನ್ನಡಕ್ಕೆ ಮಾರಕವಾಗಿದೆ ಅಂದರೆ. ತಮಿಳು ತೆಲುಗಿನ ಮಕ್ಕಳು ಬೆಂಗಳೂರಿನಲ್ಲಿ ಅವರವರ ಭಾಷೆಯಲ್ಲಿ ಜಂಗಲ್ ಬುಕ್ ನೋಡಿ ಖುಶಿಪಡಬೇಕಾದರೆ ಕನ್ನಡದ ಮಕ್ಕಳು ಇಂಗ್ಲಿಶ್ ಅಥವ ಹಿಂದಿಯನ್ನು ಸರಿಯಾಗಿ ಗೊತ್ತಿಲ್ಲದಿದ್ದರೂ ಅದನ್ನೆ ನೋಡಬೇಕಾಗಿದೆ. ಹೀಗಾದರೆ ಕನ್ನಡದ ಮಕ್ಕಳಿಗೆ ಕನ್ನಡದ ಬಗ್ಗೆ ಹಿರಿಮೆ ಹೇಗೆ ಬರುತ್ತದೆ? ಇದು ಹೀಗೆ ಮುಂದುವರಿದರೆ ಕನ್ನಡದಿಂದ ವಂಚಿತರಾಗುತ್ತಿರುವ ಸಣ್ಣ ಕಂದಮ್ಮಗಳು ಮುಂದೆ ಆಂಗ್ಲ ಹಿಂದಿ ಕಡೆ ಒಲವು ಜಾಸ್ತಿಯಾಗಿ ಕನ್ನಡವನ್ನು ಒಂದು ಎನ್ಟರ್ಟೈನ್ಮೆಂಟ್ ಮಾಧ್ಯಮವಾಗಿ ತ್ಯಜಿಸಬಹುದು. ಹೀಗಾದರೆ ಮುಂದೆ ಕನ್ನಡ ಚಿತ್ರೋದ್ಯಮದ ಗತಿಯೇನು? ಇವರು ಕನ್ನಡದಲ್ಲಿ ಮಾಡುವ ರೀಮೇಕ್ ನೋಡಿ ಅದನ್ನೆ ಮೆಚ್ಚಿ ಅಂದರೆ ಕೇಳ್ತಾರಾ ಇಂದಿನ ಮಕ್ಕಳು? ನೀವು ಇಂದು ನೋಡುತ್ತಿರಬಹುದು ಕನ್ನಡದವರೆ ಕನ್ನಡ ಸಿನಿಮಾಗಳನ್ನು ಕನ್ನಡವನ್ನು ಅಪಹಾಸ್ಯ ಮಾಡುವುದನ್ನು ಆದರೆ ಇದಕ್ಕೆಲ್ಲ ನಮ್ಮನ್ನು ನಾವೆ ದೂರಿಕೊಳ್ಳಬೇಕೆಷ್ಟೆ ಹೊರತು ಬೇರೆ ಇನ್ಯಾರನ್ನಲ್ಲ!

ಇಂದು ಕನ್ನಡದಲ್ಲಿ ಸರಿಯಾಗಿ ಚಿತ್ರಗಳನ್ನೂ ಕೊಡದೆ , ಡಬ್ಬಿಂಗನ್ನೂ ಬ್ಯಾನ್ ಮಾಡಿಕೊಂಡು ಕರ್ನಾಟಕದಲ್ಲೆ ಕನ್ನಡವು ಸೊರಗುವಂತೆ ಮಾಡಿದ್ದಾರೆ ನಮ್ಮ ಚಿತ್ರಮಂದಿ. ಕರ್ನಾಟಕದಲ್ಲಿ ಇಂದು ಹಿಂದಿ, ತೆಲುಗು, ತಮಿಳು ಚಿತ್ರಗಳು ಎಗ್ಗಿಲ್ಲದ ಪ್ರದರ್ಶನ ಕಾಣುತ್ತಿದ್ದು ಚೆನ್ನಾಗಿರುವ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಇಲ್ಲವಾಗಿದೆ.
ಹೀಗೆ ಇತರ ರಾಜ್ಯಗಳ ಚಿತ್ರಗಳು ಇಲ್ಲಿ ಹೀಗೆ ರಾಜಾರೋಷವಾಗಿ ಪ್ರದರ್ಶನ ಕಾಣುತ್ತಿರಬೇಕಾದರೆ ಆಂಧ್ರ, ತೆಲಂಗಾಣ, ತಮಿಳುನಾಡಿನಲ್ಲಿ ಕನ್ನಡ ಚಿತ್ರಗಳು ಪ್ರದರ್ಶನ ಕಾಣುತ್ತಿಲ್ಲವೇಕೆ? ಏಕೆಂದರೆ ಅವರು ಅವರ ಚಿತ್ರಗಳಿಗೆ ಮೊದಲು ಪ್ರಾಮುಖ್ಯತೆ ಕೊಟ್ಟು ನಂತರ ಚಿತ್ರಮಂದಿರಗಳು ಖಾಲಿ‌ ಇದ್ದರೆ ಇತರ ಭಾಷೆಗಳು ಎನ್ನುತ್ತಾರೆ. ಆಂಧ್ರಪ್ರದೇಶ , ತೆಲಂಗಾಣದಲ್ಲಿ ಹಿಂದಿ ಚಿತ್ರಗಳ‌ ಪ್ರದರ್ಶನ ಎಗ್ಗಿಲ್ಲದೆ ನಡೆಯುತ್ತಿದ್ದರೂ ಅಲ್ಲಿ ಕನ್ನಡ ಚಿತ್ರಗಳು ಬಿಡುಗಡೆ ಆಗಬೇಕೆಂದರೆ ಅದು ತೆಲುಗಿಗೆ ಮೊದಲು ಡಬ್ ಆಗಬೇಕಂತೆ. ಯಾಕೆ ಅದೆ ರೀತಿ ಇಲ್ಲಿ ತೆಲುಗು ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಗೆ ಮುನ್ನ ಕನ್ನಡಕ್ಕೆ ಡಬ್ ಆಗಬೇಕೆಂದರೆ, ಅವರು ಅಲ್ಲಿರುವ ಆ ಕಾನೂನನ್ನು ತೆಗೆಯುವುದಿಲ್ಲವೆ? ಆಗ ಕನ್ನಡದ ಚಿತ್ರಗಳು ಯಾವುದೆ ಅಡೆತಡೆಗಳಿಲ್ಲದೆ ಆಂಧ್ರ ತೆಲಂಗಾಣಗಳಲ್ಲಿ ಬಿಡುಗಡೆಯಾಗಬಹುದು. ಅಷ್ಟಕ್ಕೂ ಹೈದರಾಬಾದಿನಲ್ಲೆ ನೆಲೆಸಿರುವ ಕನ್ನಡಿಗರು ಹೇಳುವ ಪ್ರಕಾರ ಹೈದರಾಬಾದಿನಲ್ಲಿ ತೆಲುಗು, ಉರ್ದು ಬಿಟ್ಟರೆ ಮೂರನೆ ಅತಿ ಹೆಚ್ಚು‌‌ ಮಾತನಾಡುವ ಭಾಷೆಯೆ ಕನ್ನಡ. ಆದರೆ ಇಲ್ಲಿ ತೆಲುಗು ಚಿತ್ರಗಳು ಪ್ರದರ್ಶನ ಕಾಣುವಂತೆ ಕನ್ನಡ ಚಿತ್ರಗಳು ಅಲ್ಲಿ ಏಕೆ ಪ್ರದರ್ಶನ ಕಾಣುವುದಿಲ್ಲ? ಕನ್ನಡ ಚಿತ್ರಗಳನ್ನು ತಯಾರು ಮಾಡುವ ಪ್ರಡ್ಯೂಸರ್ ಗಳು ನಟರು ಈ ವಿಷಯಗಳನ್ನು ಕೇಳಿದರೆ ನಿಮಗೆ ತಲ್ಲಣವಾಗುವುದಿಲ್ಲವೆ? ಅದೆಲ್ಲ ಬಿಟ್ಟು ಅಯ್ಯೊ ಡಬ್ಬಿಂಗ್ ಬೇಡ ಅಂತೀರಲ್ಲ?

ಕನ್ನಡ ಸಿನಿಮಾಗಳನ್ನು ಇತರ ಭಾಷೆಗಳಿಗೆ ಡಬ್ ಮಾಡಿ ಹಂಚಿಕೆ ಮಾಡುತ್ತೀರ, ಆದರೆ ಇತರ ಭಾಷೆ ಚಿತ್ರಗಳು ಇಲ್ಲಿ ಡಬ್ ಆಗಿ ತೆರೆ ಕಾಣವುದಲ್ಲೆ ಏಕೆ ಬೇಡ ಅನ್ನುತ್ತೀರ ? ಅದರಲ್ಲೂ ಕನ್ನಡಿಗನು ಬೇಕು ಅನ್ನುತ್ತಿರುವಾಗ ಇಲ್ಲ‌ ಬೇಡ ಅನ್ನುವ ನಿಮ್ಮ ಧೋರಣೆ ಕನ್ನಡಕ್ಕೆ ಬಹಳ ಅಪಾಯಕಾರಿಯಾಗಿದೆ ತಿಳಿದಿರಿ. ಮುಂದಿನ ಪೀಳಿಗೆಯ ರಾಜಕುಮಾರರು ನಿಮಗ್ಯಾರಿಗೂ ಬೇಡವೆ?

ಅಷ್ಟಕ್ಕೂ ಕನ್ನಡಕ್ಕೆ ಡಬ್ ಬೇಡ ಅನ್ನುವವರು ಮಾಡುವ ಸ್ವಮೇಕ್ ಗಳು ಎಷ್ಟು ? ರೀಮೇಕ್ ಗಳನ್ನು ನೋಡಿ ನೋಡಿ ಬೇಸತ್ತ ಕನ್ನಡಿಗನು ಇತರ ಭಾಷೆಗಳತ್ತ ಮುಖ ಮಾಡಿದ್ದಾನೆ, ಅವನಿಗೆ ತನ್ನ ಭಾಷೆಯ ಬಗ್ಗೆ ಅಭಿಮಾನವಿಲ್ಲದಾಗಿದೆ! ಯಾಕೆ ಇದೆಲ್ಲ ನಿಮಗೆ ಗೊತ್ತಿಲ್ಲದ ವಿಷಯಗಳ? ಇಲ್ಲ ಕನ್ನಡದಲ್ಲಿ ಡಬ್ ಆಗಿ ಚಿತ್ರಗಳು ಬಂದರೆ ಇಲ್ಲಿ ಇತರ ಭಾಷಿಕ ಚಿತ್ರಗಳು ಪ್ರದರ್ಶನ ಕಾಣುವುದು ಕಡಿಮೆಯಾಗಬಹುದೆಂಬ ಅನ್ಯಭಾಷಾ ಪ್ರೇಮವಾ ? ನೀವೆ ಹೇಳಬೇಕು! ನಾಳೆ ನಾಡಿದ್ದು ಕರ್ನಾಟಕದಲ್ಲಿ ಬಿಡುಗಡೆಯಾಗುತ್ತಿರುವ ತೇರಿ ಹಾಗು ಫ್ಯಾನ್ ಚಿತ್ರಗಳ ಪ್ರದರ್ಶನ ಪಟ್ಟಿ ನೋಡಿದರೆ ಹಾಗೆಯೆ ಅನ್ನಿಸುತ್ತೆ. ಕನ್ನಡ ಚಿತ್ರಗಳು‌ ಎಂದೂ ಇಷ್ಟು ಪ್ರದರ್ಶನ ಕಂಡಿದ್ದು ನಾನು ನೋಡಿಯೆ ಇಲ್ಲ.

Monday, February 1, 2016

ಎಎಪಿ ಕರ್ನಾಟಕಕ್ಕೆ ಬಂತು! ನೀವೇನು ಇನ್ನು ನಿದ್ದೆ ಮಾಡ್ತಿದ್ದೀರ?

ಕನ್ನಡಿಗರೆ ಎಚ್ಚರ ರಾಷ್ಟೀಯ ಪಕ್ಷಗಳು ಕನ್ನಡಿಗರನ್ನು ಕೈಗೊಂಬೆಗಳಂತೆ ಮಾಡಿಕೊಂಡಿದ್ದು ಈಗಾಗಲೇ ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಅಂದುಕೊಂಡು ಆದ ಅಭಿವೃದ್ಧಿ ಅಷ್ಟಕ್ಕಷ್ಟೆ. ಇದರ ಮಧ್ಯದಲ್ಲಿ ಸ್ಥಳೀಯ ಪಕ್ಷಗಳು ಬೇಕೆಂಬ ಕೂಗು ಸಾಮಾನ್ಯ ಜನರಲ್ಲಿ ಕೇಳಿಬರುತ್ತಿದ್ದು ಕರ್ನಾಟಕದಲ್ಲಿ ಯಾವುದೇ ಸ್ಥಳೀಯ ಪಕ್ಷ ಬರದಂತೆ ನೋಡಿಕೊಳ್ಳುವ ಕೆಲಸ ಕೆಲ ಸ್ವಹಿತಾಸಕ್ತಿ ಕಾಪಾಡಿಕೊಳ್ಳಲು ಕೆಲವರು ಮಾಡುತ್ತಿರುವ ಹುನ್ನಾರವಾಗಿದೆ. ಬಿಜೆಪಿ ಕಾಂಗ್ರೆಸ್ ಗಳು ತಮಗೆ ತಾವೆ ರಾಷ್ಟೀಯ ಪಕ್ಷಗಳೆಂಬ ಹಣೆಪಟ್ಟಿ ಕಟ್ಟಿಕೊಂಡು ಜನರನ್ನು ಬೇಕಾದ ಹಾಗೆ ಆಟವಾಡಿಸುವ ಕೈಗೊಂಬೆಗಳಂತೆ ಮಾಡಿಕೊಂಡಿದ್ದಾರೆ.

ಹಾಗಾದರೆ ಕರ್ನಾಟಕದಲ್ಲಿ ನಿಜಕ್ಕೂ ಸ್ಥಳೀಯ ಪಕ್ಷಗಳು ಬೆಳೆಯಲು ಸಾಧ್ಯವಿಲ್ಲವೆ? ಇದ್ದು ಗುರುತಿಸಿಕೊಂಡಿರುವ ಜೆಡಿಎಸ್ ಆದರೂ ಕನ್ನಡಿಗನ ಹಿತಾಸಕ್ತಿಗೆ ಮುಂದಾಗುವುದೇ? ಹೀಗೆ ಕನ್ನಡಿಗರು ಸ್ಥಳೀಯ ಪಕ್ಷವೊಂದು ಬೇಕೆಂದು ಕೂತಿರುವಾಗಲೆ ದಿಲ್ಲಿ ದೊರೆಗಳು ಇಲ್ಲಿ ಸಾಮ್ರಾಜ್ಯ ಸ್ಥಾಪನೆ ಮಾಡಲು ಪಣ ತೊಟ್ಟಂಗಿದೆ. ಆರೋಗ್ಯ ತಪಾಸಣೆಗೆಂದು ಬೆಂಗಳೂರಿಗೆ ಬಂದಿದ್ದ ಕೇಜ್ರಿವಾಲ್ ಕೆಲ ಆಟೊ ರಿಕ್ಷಾದವರೊಡನೆ ಈಗಾಗಲೆ ತಮ್ಮ ಬಲ ಪ್ರದರ್ಶನ ಮಾಡಿದ್ದಾರಂತೆ. ಹಾಗೆ ಬೆಂಗಳೂರಿನ ಬೀದಿಗಳಲ್ಲಿ ಒಂದು ಸುತ್ತು ಕಣ್ಣಾಯಿಸಿದರೆ ಎಎಪಿ ಲೊಗೊ ಬ್ಯಾನರ್ಸ್ ಕನ್ನಡದಲ್ಲಿ ಕಾಣಸಿಗುತ್ತದೆ. ಕೆಲವು ಆಟೊದವರಂತು ಆಟೊ ಹಿಂದೆ ಹೀಗೆ ಬರೆಸಿದ್ದಾರೆ " ನಮಗೆ ೮ನೆ ತರಗತಿ ಓದುವುದು ಕಡ್ಡಾಯ, ಆದರೆ ರಾಜಕಾರಣಿಗಳಿಗೇಕಿಲ್ಲ " ಎಂದು. ಹೀಗಾಗಲೆ ದೆಹಲಿಯ ಪಕ್ಷಗಳು ಬೇಡವೆ ಬೇಡ ಎಂದು ಕೂತಿರುವಾಗ ಕನ್ನಡಿಗನ ಮೇಲೆ ಎಎಪಿ ಆಕ್ರಮಣ ನಡೆಸಿದೆ‌.

ಅಷ್ಟಕ್ಕೂ ನಮ್ಮ ಜನ ಇದನ್ನೆಲ್ಲ ನೋಡಿಕೊಂಡು ಸುಮ್ಮನಿದ್ದಾರೆಂದರೆ ಕನ್ನಡಿಗರು ನಿಜಕ್ಕೂ ಶಾಂತಿಪ್ರಿಯರೆಂದು ತೋರುವುದು ನಿಜ. ಆದರೆ ಹೀಗೆ ಶಾಂತಿ ಶಾಂತಿ ಎನ್ನುತ್ತಿದ್ದರೆ ಮುಂದೊಂದು ದಿನ ನಮ್ಮ ಅವನತಿಗೆ ನಾವೆ ಕಾರಣರಾಗುವ ಪರಿಸ್ಥಿತಿ ಎದುರಾಗಬಹುದು. ಬರಿಯ ಸ್ಥಳೀಯ ಪಕ್ಷಗಳೆ ಇರುವ ತಮಿಳುನಾಡಿನಲ್ಲಿ ಮತ್ತೊಂದು ಪಕ್ಷ ಹುಟ್ಟುತ್ತಿದೆಯಂತೆ ಈಗ ಬರುವ ಚುನಾವಣೆಗೆ. ಕರ್ನಾಟಕದಲ್ಲಿ ಚುನಾವಣೆ ಕಾವಿಗೆ ಇನ್ನೂ ಹೆಚ್ಚುಕಮ್ಮಿ ಎರಡು ವರುಶಗಳ ಸಮಯವಿದೆ. ನೋಡೊಣ ಏನಾಗುತ್ತೆ ಯಾವ ಹೊಸ ಸ್ಥಳೀಯ ಪಕ್ಷಗಳು ಹುಟ್ಟುತ್ತದೊ ಇಲ್ಲ.

ರಾಷ್ಟ್ರೀಯ ಪಕ್ಷಗಳು ನಮ್ಮ ಕರ್ನಾಟಕದ ಜನರಿಗೆ ತ್ರಿಭಾಷಾ ಸೂತ್ರದ ನೆಪ ಹೇಳಿಕೊಂಡು ಹಿಂದಿ ಹೇರಿಕೆ ಮಾಡಿ. ರೈಲು ನಿಲ್ದಾಣಗಳಲ್ಲಿ ಕನ್ನಡದಲ್ಲಿ ಟ್ರೈನ್ ವೇಳಾಪಟ್ಟಿ ಇಲ್ಲ ಆದರೆ ಹಿಂದಿ ಇಂಗ್ಲಿಶ್ ಹಿಂದಿಗಳಲ್ಲಿ ಲಭ್ಯ. ರೈಲು ಟಿಕೆಟ್ ಗಳು ಕನ್ನಡದಲ್ಲಿ ಸಿಗುವುದಿಲ್ಲ ಆದರೆ ಹಿಂದಿ ಇಂಗ್ಲಿಷ್ ನಲ್ಲಿ ಲಭ್ಯ. ಅಷ್ಟಾದರೂ ಕರ್ನಾಟಕದಲ್ಲಿ ಕನ್ನಡವಿಲ್ಲದ ಈ ವ್ಯವಸ್ಥೆ ಬರುವುದಕ್ಕೆ ಬಿಟ್ಟುಕೊಂಡಿದ್ದಾದರೂ ಹೇಗೆ? ಇತ್ತೀಚೆಗೆ ನೀವು ಗಮನಿಸಿರಬಹುದು ಕರ್ನಾಟಕದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಿಂದಿ ಕನ್ನಡಕ್ಕೆ ಮಿಗಿಲಾಗಿ ಮೊದಲ ಆದ್ಯತೆಗೆ ಒಳಪಟ್ಟು ರಾರಾಜಿಸುತ್ತಿದೆ. ಹಾಗಿದ್ದರೆ ಕರ್ನಾಟಕದಲ್ಲೆ ಕನ್ನಡವನ್ನು ಕೀಳು ಮಾಡಿದ್ದೇಕೆ? ಕರ್ನಾಟಕ ಅಂದರೆ ಬರಿ ಕನ್ನಡವಿದ್ದ ರಾಜ್ಯದಲ್ಲಿಂದು ಹಿಂದಿ ಇಂಗ್ಲಿಷ್ ಗಳು ಬಂದು ಕನ್ನಡವನ್ನೆ ಎತ್ತಂಗಡಿ ಮಾಡುವ ಕೆಲಸಕ್ಕೆ ಕೈಹಾಕಿವೆ ಅದರಲ್ಲೂ ಹಿಂದಿ ಹೇರಿಕೆ ಮಾಡುವಲ್ಲಿ ಕೇಂದ್ರ ಸರಕಾರವಂತೂ ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳುತ್ತಿದೆ. ಕರ್ನಾಟಕದಲ್ಲಿ ಬ್ಯಾಂಕ್ ಒಂದರ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ. ಬ್ಯಾಂಕ್ ನವರು ನಮ್ಮೊಂದಿಗೆ ವ್ಯವಹರಿಸಲು ಅವರು ನಮ್ಮ ಭಾಷೆ ಕಲಿಯಬೇಕೊ ಇಲ್ಲ ನಾವು ಅವರ ಭಾಷೆಯನ್ನೊ. ಇಲ್ಲಿಯ ಪರಿಸ್ಥಿತಿ ನೋಡಿದರೆ ನಾವೆ ಅವರ ಭಾಷೆ ಮಾತನಾಡುವಂತಾಗಿದೆ. ಎಂತಹ ದುರದೃಷ್ಟ ನೋಡಿ ಕೇಂದ್ರ ಹಿಂದಿಯನ್ನು ಭಾರತದಾದ್ಯಂತ ಸಿ ಬಿ ಎಸ್ ಇ ಶಾಲೆಗಳಲ್ಲಿ ಕಡ್ಡಾಯ ಮಾಡಿದೆ ಆದರೆ ಕರ್ನಾಟಕ ರಾಜ್ಯ ಸರಕಾರ ಕರ್ನಾಟಕದ ಶಾಲೆಗಳಲ್ಲಿ ಕನ್ನಡ ಕಲಿಯುವುದನ್ನು ಕಡ್ಡಾಯ ಮಾಡುವ ಹಾಗಿಲ್ಲ.

ಇಷ್ಟೆಲ್ಲ ನಡೆಯುತ್ತಿದ್ದರೂ ನಮ್ಮ ಕರ್ನಾಟಕದ ರಾಷ್ಟ್ರೀಯ ಪಕ್ಷಗಳಲ್ಲಿನ ರಾಜಕೀಯ ಧುರೀಣರು ಏನೂ ಆಗಿಲ್ಲವೆಂಬಂತೆ ನಡೆಯುತ್ತಿದ್ದಾರೆ. ಇಷ್ಟೆಲ್ಲ ಸಂಗತಿಗಳು ನಡೆಯುತ್ತಿದೆ ಕರ್ನಾಟಕಕ್ಕೆ ಇನ್ನೂ ಒಂದು ಪ್ರಬಲ ಸ್ಥಳೀಯ ರಾಜಕೀಯ ಪಕ್ಷವೊಂದು ಇಲ್ಲವಾಗಿದೆ. ಕನ್ನಡಿಗ ಸೊರಗಿದ್ದಾನೆ ಎತ್ತ ನೋಡಿದರೂ ಕಿತ್ತು ತಿನ್ನುವ ರಣಹದ್ದುಗಳೆ.
ಕನ್ನಡಿಗರೆ ಏಳಿ ಎದ್ದೇಳಿ.

Friday, January 22, 2016

ನನಗೆ ನೋವು ಅರ್ಥ ಆಗುತ್ತದೆ. ಪಿ ಎಮ್ ಮೋದಿ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ

ಪ್ರಧಾನಿ ನರೇಂದ್ರ ಮೋದಿಯವರು ಲಕ್ನೌನ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ಮಾತನಾಡುತ್ತ ಹೈದರಾಬಾದ್ ನಲ್ಲಿ ನೇಣು ಬಿಗಿದುಕೊಂಡು ಹತನಾದ ರಾಹುಲ್ ವೆಮುಲನನ್ನು ನೆನೆಯುತ್ತ ಉದ್ವೇಗಕ್ಕೆ ಒಳಗಾಗಿ ನನಗೆ ನೋವು ಅರ್ಥವಾಗುತ್ತದೆ ಎಂದಿದ್ದಾರೆ.

ಮೋದಿ ಆತನ ಸಾವನ್ನು ಪರಿತಪಿಸುತ್ತ, " ರಾಜಕೀಯ ಬದಿಗಿಟ್ಟು, ಒಬ್ಬ ತಾಯಿ ತನ್ನ ಮಗನನ್ನು ಕಳೆದುಕೊಂಡಿದ್ದಾಳೆ" ನನಗೆ ತುಂಬಾ ಬೇಸರವಾಗಿದೆ ಎಂದರು. ತಾಯಿ ಮಗನನ್ನು ಕಳೆದುಕೊಂಡಾಗ ಅದಕ್ಕಿಂತ ದೊಡ್ಡ ಸಂಕಟ ಯಾವುದೂ ಇಲ್ಲ ಎಂದು ಹೇಳಿದರು.

Wednesday, January 13, 2016

ನರೇಂದ್ರ ಮೋದಿಯವರ ತಮಿಳ್, ಬೆಂಗಾಲಿ, ತೆಲುಗು, ಗುಜರಾತಿ ಪ್ರೀತಿ ಕನ್ನಡಕ್ಕೆ ಏಕಿಲ್ಲ?

ದೇಶದಲ್ಲೆಡೆ ಸಂಕ್ರಾಂತಿ ಸುಗ್ಗಿಯ ಸಮಯ ಬಂದಿದೆ. ದೇಶದ ಮಹಾನಾಯಕರು ದೇಶದ ಮಂದಿಗೆ ತಮ್ಮ ಹಾರೈಕೆಗಳನ್ನು ತಿಳಿಸುವ ಸುಸಮಯ. ದೇಶದ ಪ್ರತಿ ಮಂದಿಗೆ ಅವರ ನುಡಿಯಲ್ಲಿ ಹಾರೈಸುವುದು ಎಲ್ಲ ನಾಯಕರು ಅನುಸರಿಸುವ ನೀತಿಯಾಗಿದೆ. ಹೀಗಿರುವಾಗ ಮೋದಿಯವರು ದೇಶದ ಜನರನ್ನು ತಲುಪಲು ತಮಿಳು, ತೆಲುಗು, ಬೆಂಗಾಲಿ ನುಡಿಗಳಲ್ಲಿ ಟ್ವೀಟಿಸಿದರು ಆದರೆ ಕನ್ನಡದಲ್ಲಿ ಮಾಡಲಿಲ್ಲ.

ಏಕೆ ತಮಿಳು, ತೆಲುಗು, ಬೆಂಗಾಲಿಯಂತೆ ನಮ್ಮದೂ ಒಂದು ನುಡಿಯಲ್ಲವೇ, ಹಾಗಿದ್ದರೆ ನಮಗೆ ಏಕೆ ಪ್ರಧಾನ ಮಂತ್ರಿಗಳು ಕನ್ನಡದಲ್ಲಿ ಸಂಕ್ರಾಂತಿ ಹಬ್ಬದ ಹಾರೈಕೆ ಮಾಡಲಿಲ್ಲ? ನಿಮಗೂ ಈ ಪ್ರಶ್ನೆ ಸಾಮಾನ್ಯವಾಗಿ ಮೂಡುವುದುಂಟು. ಇಂದು ಭಾರತ ದೇಶವು ಹಿಂದಿಗೆ ವಿಶ್ವದಲ್ಲಿ ಮಾನ್ಯತೆ ದಕ್ಕಿಸಿಕೊಳ್ಳಲು ಮಾಡಿಲ್ಲದ ಕಸರತ್ತು ಅಶ್ಟಿಶ್ಟಲ್ಲ. ವಿಶ್ವಕ್ಕೆ ಹೋಗುವ ಮುನ್ನ ಭಾರತವನ್ನು ಮೊದಲು ಹಿಂದಿ ಆಕ್ರಮಿಸುವುದು ಅದಕ್ಕೆ ಅಗತ್ಯವಾಗಿದೆ‌. ಇದಕ್ಕೆ ರಾಜಭಾಷಾ ಸಚಿವಾಲಯವೂ ಇದೆ. ಭಾರತದೆಲ್ಲೆಡೆ ಹಿಂದಿ ಪ್ರಮೋಟ್ ಮಾಡಲು ಹರಡಲು ಹೊರಟಿದೆ. ಭಾರತದ ಈ ಧೋರಣೆಯನ್ನು ಯಾವಾಗಲೊ ಅರಿತಿದ್ದ ತಮಿಳರು ಇದಕ್ಕೆ ವಿರುದ್ಧ ದೊಡ್ಡ ಪ್ರತಿಭಟನೆಯನ್ನೆ ಮಾಡಿ ಹಿಂದಿಯಿಂದ ಮುಕ್ತಿ ಪಡೆದರು. ಬೆಂಗಾಲಿನಲ್ಲೂ ಇದಕ್ಕೆ ಪೂರಕವಾಗಿ ಪ್ರತಿಭಟನೆಗಳು ನಡೆದು ಅವರೂ ಕೊಂಚ ಮಟ್ಟಿಗೆ ಹಿಂದಿಯಿಂದ ಮುಕ್ತಿ ಪಡೆದರು.

PM ಮೋದಿಯವರನ್ನು ನಂಬಿ ವೊಟ್ ಹಾಕಿದ ಎಷ್ಟೊ ಮಂದಿಗೆ ಇನ್ನೂ ಅರ್ಥವಾಗದ ವಿಷಯವೇನೆಂದರೆ, ಬಿಜೆಪಯನ್ನು ಸೋಲಿಸಿದ ತಮಿಳರ ನುಡಿಯಲ್ಲಿ ಅವರಿಗೆ ಶುಭಾಶಯ ಕೋರಿದ್ದಾರೆ, ನಾವು ೧೮ ಮಂದಿ ಬಿಜೆಪಿ ಸಂಸದರನ್ನು ಆರಿಸಿ ಕಳಿಸಿದ್ದೇವೆ ನಮಗೆ ಕನ್ನಡದಲ್ಲಿ ಏಕೆ ಹಾರೈಕೆ ಮಾಡಲಿಲ್ಲ ಎಂಬುದು. ಈ ವಿಷಯವು ಪ್ರತಿಯೊಬ್ಬ ಕನ್ನಡಿಗನನ್ನು ಕೊರೆದು ಕೆರಳುವಂತೆ ಮಾಡಿದೆ. ಇಂದು ಕನ್ನಡದಲ್ಲಿ ಹಾರೈಕೆ ಮಾಡದವರು ಮುಂದೆ ಕನ್ನಡದ ಅಸ್ತಿತ್ವವನ್ನೆ ಪ್ರಶ್ನಿಸಬಹುದು. ಬೇಕಿತ್ತಾ ನಮಗೆ ಈಗ ಕನ್ನಡಕ್ಕೆ ಬೆಲೆಕೊಡದ ಈ ಬಿಜೆಪಿ? ಹದಿನೆಂಟು MP ಗಳಲ್ಲಿ ಯಾರಾದರು ಒಬ್ಬ MP ಗೆ PM ರಿಂದ ಕನ್ನಡದಲ್ಲಿ ನೀವೇಕೆ ಕನ್ನಡಿಗರಿಗೆ ಸಂಕ್ರಾಂತಿ ಶುಭ ಕೋರಲಿಲ್ಲ ಎಂದು ಪ್ರಶ್ನಿಸುವ ತಾಕತ್ತಿದೆಯೇ, ಹಾಗೆ ಮಾಡಲು ಪ್ರತಿಯೊಬ್ಬ ಕನ್ನಡಿಗನು ನಿಮ್ಮ MPಗಳಿಗೆ ಪತ್ರ ಬರೆಯಿರಿ PMಗೆ ಕನ್ನಡದಲ್ಲಿ ನಮಗೆ ಶುಭ ಕೋರಲು ಮನವಿ‌ ಮಾಡಿರಿ.

Tuesday, January 12, 2016

ನಮ್ಮ ಮೆಟ್ರೊ ನಮಗೆ ಕೆಲಸ ಯಾಕೆ ಇಲ್ಲ

ಬೆಂಗಳೂರು ಮೆಟ್ರೊ ರೈಲು ಸಂಸ್ಥೆಯು ಕರ್ನಾಟಕ ಹಾಗು ಕೇಂದ್ರದ ಜಂಟಿ ಆಡಳಿತಕ್ಕೆ ಒಳಪಟ್ಟಿದ್ದು ಇಬ್ಬರೂ ಕೂಡಿ ಮಾಡುತ್ತಿರುವ ಪ್ರಾಜೆಕ್ಟ್ ಆಗಿದೆ. ಜಂಟಿಯಾಗಿ ಮಾಡಲ್ಪಡುವ ಯಾವುದೇ ಕೆಲಸವಾಸರೂ ರಾಜ್ಯದ ಪರವಾಗಿ, ರಾಜ್ಯಕ್ಕೆ ಅನುಕೂಲವಾಗಿ ಇರಬೇಕೆಂಬುದು ಪ್ರತಿ ರಾಜ್ಯದ ಹಿತಾಸಕ್ತಿ ಕಾಪಾಡಲು ಅವಶ್ಯವಾಗಿರುತ್ತದೆ.

ಮೊದಲಿಗೆ ಮೆಟ್ರೊ ಕಾಮಗಾರಿಯಲ್ಲಿ ಕರ್ನಾಟಕ ಸರಕಾರವು ಕೇಂದ್ರಕ್ಕೆ ಯಾವುದೇ ರೀತಿಯ ಶರತ್ತುಗಳನ್ನು ಹಾಕಿಲ್ಲವೆಂಬುದು ಮೇಲ್ನೊಟಕ್ಕೆ ಗೊತ್ತಗುವ ವಿಶಯ. ಏಕೆಂದರೆ ಮೆಟ್ರೊ ನಲ್ಲಿ ಹಿಂದಿಯ ಅವಶ್ಯಕತೆಯಿಲ್ಲದಿದ್ದರೂ ಎಲ್ಲೆಂದರಲ್ಲಿ ಹಿಂದಿ ಕಾಣಸಿಗುತ್ತದೆ. ಬೆಂಗಳೂರು ಸಂತೆಯನ್ನು ಬೆಂಗಳೂರು ಹಾತ್ ಅಂತ ಮಾಡಿಕೊಂಡು ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಬೆಂಗಳೂರಿನ ಮೆಟ್ರೊಗಳಲ್ಲಿ ಕನ್ನಡಿಗರಿಗೆ ಕೆಲಸವಿಲ್ಲದಂತೆ ಮಾಡಿದ್ದಾರೆ. ಕನ್ನಡವೇ ಬರದ ಕೆಲಸಗಾರರನ್ನು ಮೆಟ್ರೊ ಸೆಕ್ಯುರಿಟಿಯಲ್ಲಿ ನೇಮಕ ಮಾಡಿದ್ದಾರೆ. ಏಕೆ ಕರ್ನಾಟಕ ಸರಕಾರದ ಅಡಿಯಲ್ಲಿ ಪೊಲೀಸ್ ಇಲಾಖೆಯ ಮೂಲಕ ಮೆಟ್ರೊ ಸೆಕ್ಯುರಿಟಿಗೆ ಕರ್ನಾಟಕದವರನ್ನು ನೇಮಕ ಮಾಡಲು ಸಿ ಎಮ್ ಸಿದ್ದರಾಮಯ್ಯನವರು ಎಡವಿದ್ದಾರೆಯೆ? ಯಾವ ಶಕ್ತಿಯು ಅವರಿಗೆ ಹೀಗೆ ಮಾಡದಂತೆ ತಡೆಯೊಡ್ಡುತ್ತಿದೆ?

ನಮ್ಮ ಮೆಟ್ರೊ ಅಂತ ಬಾಯಿಮಾತಿಗೆ ಹೇಳುವ ಸರಕಾರ ಮೆಟ್ರೊನಲ್ಲಿ ಕರ್ನಾಟಕದ ಗಂಡು ಹೆಣ್ಣು ಮಕ್ಕಳಿಗೆ ಕೆಲಸ ಸಿಗುವಂತೆ ನೋಡಿಕೊಳ್ಳಬೇಕಾಗಿದೆ. ಎಲ್ಲೆಂದರಲ್ಲಿ ಹಿಂದಿ ಹೇರುತ್ತಿರುವ ಕೇಂದ್ರ ಸರಕಾರಕ್ಕೆ ‍‍ಎಚ್ಚರಿಸಬೇಕಿದೆ.

ಇಂತಿ
ಕನ್ನಡಿಗ

Monday, January 11, 2016

ಇಂಗ್ಲಿಶ್ ಕಪಿಮುಶ್ಟಿ

ಹಾಗೆ ಸುಮ್ಮನೆ ಬಿ.ಎಮ್.ಟಿ.ಸಿ ಬಸ್ಸಿನಲ್ಲಿ ಸಂಚಾರ ಮಾಡುವಾಗ ಸ್ಕೂಲಿನಿಂದ ಮನೆಗೆ ತೆರಳುತ್ತಿದ್ದ ಪುಟ್ಟ ಮಕ್ಕಳು ಸುಮಾರು ೭ ಕ್ಲಾಸಿರಬಹುದು ಬಸ್ಸಿನಲ್ಲಿ ಕುಳಿತು ಇಂಗ್ಲಿಶ್ ಮಾತನಾಡುವುದ ಕಂಡೆ. ಸಣ್ಣ‌ ಮಕ್ಕಳು ಇಶ್ಟು ಬೇಗ ಇಂಗ್ಲಿಶ್ ಕಲಿತವು ಎಂದು ಸಂತಸ ಪಡುವವರು ಒಂದು ಕಡೆಯಾದರೆ, ಮಕ್ಕಳು ಸಂತಸದಿಂದ ತಮ್ಮ ತಾಯಿನುಡಿಯಲ್ಲಿ ಮಾತನಾಡಬೇಕಾದ ಈ ವಯಸ್ಸಿನಲ್ಲಿ ಆಂಗ್ಲ ಶಾಲೆಗಳ ಪ್ರಬಾವದಿಂದ ಇಂಗ್ಲಿಶ್ ಮಾತನಾಡುತ್ತಿದ್ದಾವಲ್ಲ ಅಂತ ನೋವುಪಡುವ ನನ್ನಂತವರು ಇನ್ನೊಂದುಕಡೆ.

ಮಕ್ಕಳು ಇಂಗ್ಲಿಶ್ ಮಾತನಾಡುತ್ತ , ನಡುವಲ್ಲಿ ಕನ್ನಡ ಮಾತನಾಡುವುದ ಗಮನಿಸಿದ ನಾನು ಹಾಗೆ ಯೋಚಿಸಿದೆ. ಈ ಮಕ್ಕಳಲ್ಲಿ ಯಾವ ಮಟ್ಟಿಗೆ ಇಂಗ್ಲಿಶ್ ಎಂಬ ಬೂತ ಸೆಳೆದಿದೆ ಎಂದು. ಇಂದು ಪ್ರೈವೇಟ್ ಕಾಲೇಜಿಗೆ ಹೋಗುವ ಮಕ್ಕಳಲ್ಲಿ ಹೆಚ್ಚಾಗಿ ತಮ್ಮ ತಮ್ಮ ನುಡಿಗಳ ಬಗ್ಗೆ ಕೀಳರಿಮೆ ಬೆಳಸಲು ಇಂಗ್ಲಿಶ್ ಕೇಂದ್ರಿತ ಸರ್ಕಾರಿ ಹಾಗು ಗ್ರಾಹಕ ಸೇವೆಗಳೆ ಕಾರಣವಾಗಿವೆ !